ಟಾಟಾ, ಜಮ್‍ಶೇದ್ ಜೀ ನಸರ್‍ವಾನ್ ಜೀ
	1839-1904. ಭಾರತದ ಆಧುನಿಕ ಕೈಗಾರಿಕೋದ್ಯಮದ ಆದ್ಯಪ್ರವರ್ತಕ, ಅನೇಕ ಪ್ರಗತಿಪರ ಕೈಗಾರಿಕಾ ಸಂಸ್ಥೆಗಳ ಸ್ಥಾಪಕ. ಜನನ 1839, ನವಸಾರಿಯಲ್ಲಿ. ಜûರತುಷ್ಟ್ರ ಮತದವರಾದ ಇವರ ಪೂರ್ವಜರು ಸುಮಾರು ಇಪ್ಪತ್ತೈದು ತಲೆಮಾರುಗಳಿಂದ ಅಲ್ಲಿ ನೆಲೆಸಿದ್ದರು.

	ಜಮ್‍ಶೇದ್ ಜೀಯವರು ನವಸಾರಿಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದರು. 14ನೆಯ ವರ್ಷದಲ್ಲಿ ಮುಂಬಯಿಯ ಎಲ್ಫಿನ್‍ಸ್ಟನ್ ಸಂಸ್ಥೆಯನ್ನು ಸೇರಿ ಅನಂತರ ಎಲ್ಫಿನ್‍ಸ್ಟನ್ ಕಾಲೇಜಿನ ವಿದ್ಯಾರ್ಥಿಯಾದರು. ಇವರು ವಿದ್ಯಾರ್ಥಿಯಾಗಿದ್ದಾಗಲೇ ಹೀರಾಬಾಯಿಯವರೊಂದಿಗೆ ಇವರ ವಿವಾಹವಾಗಿತ್ತು. ಕಾಲೇಜು ಸೇರಿದ ಎರಡು ವರ್ಷಗಳೊಳಗೆ ಇವರು ವಿದ್ಯಾಭ್ಯಾಸವನ್ನು ಬಿಟ್ಟು ತಂದೆಯವರ ವ್ಯಾಪಾರದಲ್ಲಿ ತೊಡಗಬೇಕಾಯಿತು. ಚೀನದ ಷಾಂಗ್‍ಹೈಯಲ್ಲಿ ತಂದೆಯ ವ್ಯಾಪಾರ ಸಂಸ್ಥೆಯ ವಿಭಾಗವೊಂದನ್ನು ತೆರೆಯಲು ಇವರನ್ನು ಕಳುಹಿಸಲಾಯಿತು. ಅಲ್ಲಿ ಇವರು ಸಾಕಷ್ಟು ಹಣ ಗಳಿಸಿದರು. ಆ ವೇಳೆಗೆ ಸರಿಯಾಗಿ ಅಮೆರಿಕದ ಅಂತರ್ಯುದ್ಧ ಆರಂಭವಾಯಿತು. ಹತ್ತಿಯನ್ನು ಕೊಳ್ಳಲು ಹಣ ಸುರಿದ ಜಮ್‍ಶೇದ್ ಜೀಗೆ ಅಗಾಧ ನಷ್ಟವುಂಟಾಯಿತು. ಈ ಸಮಯದಲ್ಲಿ ಇಂಗ್ಲೆಂಡಿನಲ್ಲಿದ್ದ ಇವರು ಎದೆಗುಂದದೆ ವ್ಯಾಪಾರ ಮುಂದುವರಿಸಿದರು.

	ತಮ್ಮ ಹಿರಿಯರಿಂದ ನಡೆದುಬಂದ ಸಾಂಪ್ರದಾಯಿಕ ವ್ಯಾಪಾರವಷ್ಟರಿಂದಲೇ ತೃಪ್ತರಾಗದೆ ಜವಳಿ ಕೈಗಾರಿಕೆಯತ್ತ ಗಮನ ಹರಿಸಿದರು. 1877ರ ಹೊಸ ವರ್ಷದಿನದಂದು ನಾಗಪುರ ಎಂಪ್ರೆಸ್ ಮಿಲ್ಸ್ ಎಂಬ ಹತ್ತಿ ಗಿರಣಿಯನ್ನು ಸ್ಥಾಪಿಸಿದರು. ವ್ಯವಸ್ಥಾಪನೆಯಲ್ಲಿ ದೂರದೃಷ್ಟಿ. ಯಂತ್ರದ ಆಧುನೀಕರಣದಲ್ಲಿ ಆಸಕ್ತಿ. ಕೆಲಸದ ಸ್ಥಿತಿಗತಿಗಳತ್ತ ವಿಶೇಷ ಗಮನ, ಕಾರ್ಮಿಕರ ಯೋಗಕ್ಷೇಮ-ಇವುಗಳಿಂದಾಗಿ ಗಿರಣಿ ಲಾಭಪ್ರದವಾಯಿತು. ಇವರು ಕುರ್ಲಾ, ಅಹಮದಾಬಾದುಗಳ ಎರಡು ಹಳೆಯ ಗಿರಣಿಗಳನ್ನು ನವೀಕರಿಸಿ ಸುಭದ್ರ ಅಸ್ತಿಭಾರದ ಮೇಲೆ ನಿರ್ಮಿಸಿದರು. ಆ ಮಿಲ್ಲುಗಳ ಹೆಸರುಗಳಾದ ಸ್ವದೇಶಿ ಮತ್ತು ಅಡ್ವಾನ್ಸ್ ಎಂಬವು ಇವರ ರಾಷ್ಟ್ರಾಭಿಮಾನ ಹಾಗೂ ಆಧುನಿಕ ದೃಷ್ಟಿಯ ದ್ಯೋತಕಗಳಾಗಿವೆ.

	ಭಾರತದ ಸರ್ವತೋಮುಖವಾದ ಬೆಳೆವಣಿಗೆಗಾಗಿ ಇವರು ನಿರಂತರವಾಗಿ ಶ್ರಮಿಸಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತ ಇತರ ದೇಶಗಳೊಡನೆ ಸ್ಪರ್ಧಿಸಬೇಕಾಗಿತ್ತು. ಹಡಗಿನಲ್ಲಿ ಸರಕು ಸಾಗಿಸಲು ತೆಗೆದುಕೊಳ್ಳುತ್ತಿದ್ದ ಶುಲ್ಕವನ್ನು ಇವರು ಕಡಿಮೆ ಮಾಡಿಸಿ, ಭಾರತೀಯ ವ್ಯಾಪಾರೋದ್ಯಮಿಗಳು ಇತರರೊಡನೆ ಸ್ಪರ್ಧಿಸಲು ಅನುಕೂಲ ಮಾಡಿಕೊಟ್ಟರು. ಸಾಲ್ಸೆಟ್ ದ್ವೀಪದಲ್ಲಿ ಕಟ್ಟಡಗಳನ್ನು ಕಟ್ಟುವುದಕ್ಕೆ ವಿಧಿಸುತ್ತಿದ್ದ ಭಾರೀ ದಂಡವನ್ನು ತಪ್ಪಿಸಲು ಮುಂಬಯಿ ಸರ್ಕಾರದೊಡನೆ ಹೋರಾಟ ನಡೆಸಿ ಯಶಸ್ವಿಯಾದರು. ಮುಂಬಯಿ ನಗರದ ಅನೇಕ ಭವ್ಯ ಕಟ್ಟಡಗಳು ಇವರ ದಾನದ ಫಲ. ಮುಂಬಯಿಯ ಅಭಿವೃದ್ಧಿಯಲ್ಲಿ ಇವರಿಗೆ ವಿಶೇಷವಾದ ಆಸಕ್ತಿಯಿತ್ತು. ಇವರು ತಮ್ಮ ಹುಟ್ಟೂರಾದ ನವಸಾರಿಯಲ್ಲಿ ಕುಡಿಯುವ ನೀರಿನ ಬಾವಿಗಳನ್ನು ತೋಡಿಸಿದರು. 

	ಜಮ್‍ಶೇದ್ ಜೀ ಅವರು ಶಿಕ್ಷಣದಲ್ಲಿ ಹೊಂದಿದ್ದ ಆಸಕ್ತಿ ಅಪಾರ. ಇವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ವಿಜ್ಞಾನ ಸಂಶೋಧನೆಯ ಬೆಳೆವಣಿಗೆಗಾಗಿ ಇವರು ಪಟ್ಟ ಶ್ರಮ ವಿಶಿಷ್ಟವಾದದ್ದು. ಭಾರತದ ಅತ್ಯಂತ ಪ್ರಮುಖ ಸಂಶೋಧನೆ ಸಂಸ್ಥೆಗಳಲ್ಲೊಂದಾದ, ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಇವರ ಉದಾರ ಕೊಡುಗೆಯ ಫಲ. ಇವರು ಅದಕ್ಕಾಗಿ 30 ಲಕ್ಷರೂಪಾಯಿಗಳನ್ನು ಮೂಲಧನವಾಗಿ ಇಟ್ಟರು. ಅದರ ಅಂತಿಮ ಯೋಜನೆ ಸಿದ್ಧವಾಯಿತು. ಆದರೆ ಅದು ನಿರ್ಮಾಣವಾದ್ದನ್ನು ಕಾಣುವ ಸುಯೋಗ ಅವರಿಗೆ ಇರಲಿಲ್ಲ. ಅವರ ಮರಣಾನಂತರ. 1911ರಲ್ಲಿ ಅದು ಅಸ್ತಿತ್ವಕ್ಕೆ ಬಂತು.

	ಟಾಟಾ ಅವರ ಮತ್ತೊಂದು ಮುಖ್ಯ ಸಾಧನೆಯೆಂದರೆ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ. ಅದರ ರೂಪುರೇಖೆಗಳನ್ನು ಸಿದ್ಧಪಡಿಸಿ, ಅದರ ಕಾರ್ಯ ರೂಪಕ್ಕೆ ಬೇಕಾದ ಹಣವೊದಗಿಸಿ ತಮ್ಮ ಮಗ ದೊರಾಬ್ಜಿಗೆ ಆ ಕಾರ್ಯವನ್ನು ವಹಿಸಿದರು. ಸಾಕ್‍ಚಿಯಲ್ಲಿ ಸ್ಥಾಪಿತವಾದ ಈ ಕಾರ್ಖಾನೆ ರಾಷ್ಟ್ರಪ್ರಗತಿಯ ಸಂಕೇತವಾಗಿ ಪರಿಣಮಿಸಿದೆ. ಇಲ್ಲಿ ಬೆಳೆದಿರುವ ನಗರಕ್ಕೆ ಜಮ್‍ಶೇದ್ ಪುರವೆಂದೇ (ಜಮ್ಷೆಡ್‍ಪುರ) ಹೆಸರಾಗಿದೆ. ವಿದ್ಯುದುತ್ಪಾದನೆಯಲ್ಲೂ ಇವರ ಆಸಕ್ತಿ ಹಬ್ಬಿತ್ತು. ಮೈಸೂರಿನ ಶಿವನಸಮುದ್ರದಲ್ಲಿ ಕಾವೇರಿ ನದಿಯಿಂದ ವಿದ್ಯುಚ್ಭಕ್ತಿಯನ್ನು ಉತ್ಪಾದಿಸಿ. ಕೋಲಾರದ ಚಿನ್ನದ ಗಣಿಗೆ ವಿದ್ಯುತ್ತನ್ನು ಸರಬರಾಜು ಮಾಡುತ್ತಿದ್ದುದನ್ನು ನೋಡಿ ಅರಿತ ಜಮ್‍ಶೇದ್ ಜೀಯವರು ಪಶ್ಚಿಮ ಭಾರತದಲ್ಲಿ ಇದಕ್ಕಾಗಿ ಯೋಜನೆಯೊಂದನ್ನು ರಚಿಸಿದರು. ಆದರೆ ಆ ಇಚ್ಛೆ ಪೂರ್ಣವಾಗುವ ಮೊದಲೇ ಇವರು ತೀರಿಕೊಂಡರು. ಈ ವಿದ್ಯುದುತ್ಪಾದನ ಕೇಂದ್ರ ಜವಳಿ ಕೈಗಾರಿಕೆಗೆ ವಿಶೇಷ ಉತ್ತೇಜನ ನೀಡಿತು. ಭಾರತದ ಆಧುನಿಕ ಕೈಗಾರಿಕೆಗೆ ಅಗತ್ಯವಾದ ಅಧೋರಚನೆಯ ನಿರ್ಮಾಣದಲ್ಲಿ ಇದು ಮುಖ್ಯವಾದ್ದು.

	ಇಂಥ ಹಲವು ಮಹತ್ಕಾರ್ಯಗಳ ಆದ್ಯಪ್ರರ್ವತಕರಾದ ಜಮ್‍ಶೇದ್ ಜೀ ಅವರು ಕೈಗಾರಿಕಾ ಕ್ಷೇತ್ರದಲ್ಲಿ ಹೊಸದೊಂದು ಹಾದಿಯನ್ನು ನಿರ್ಮಿಸಿದರು. ಕೆಲಸಗಾರರ ಕ್ಷೇಮಾಭಿವೃದ್ಧಿಯಲ್ಲಿ ಇವರು ಆಸಕ್ತಿ ಹೊಂದಿದ್ದರು. ಗಳಿಸಿದ ಹಣವನ್ನು ಸರಿಯಾದ ಮಾರ್ಗದಲ್ಲಿ ತೊಡಗಿಸಿ ರಾಷ್ಟ್ರಪ್ರಗತಿಗೆ ಸಹಾಯಕರಾದರು. ತಾವು ಗಳಿಸಿದ ಹಣದಲ್ಲಿ ಒಂದು ಭಾಗವನ್ನು ದತ್ತಿಯಾಗಿರಿಸಿ ಅದರಿಂದ ಭಾರತದ ತರುಣರ ಉಚ್ಚ ಶಿಕ್ಷಣಕ್ಕೆ ಸಹಾಯ ನೀಡಿದರು. ಇಂಡಿಯನ್ ಸಿವಿಲ್ ಸರ್ವಿಸ್ ಪದವೀಧರರಲ್ಲಿ ನೂರಕ್ಕೆ 20 ಮಂದಿ ಭಾರತೀಯರು ಟಾಟಾ ವಿದ್ಯಾರ್ಥಿವೇತನದಿಂದ ವ್ಯಾಸಂಗ ಮಾಡಿದವರೆಂದು ಹೇಳಲಾಗಿದೆ.

	ಜಮ್‍ಶೇದ್ ಜೀ ಟಾಟಾ ಅವರು 1904ರ ಮೇ 19ರಂದು ದೈವಾಧೀನರಾದರು.			(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ